Story Pic

ಮೂರುಸಲ ಅನುತ್ತೀರ್ಣಳಾದಳು. ಗಂಡ ಮನೆಗೆ ಬಂದು ಬಿಡು ಎಂದ. ನಾಲಕ್ಕನೇ ಪ್ರಯತ್ನದಲ್ಲಿ IAS ಪಾಸಾದಳು.

ಇವರ ಹೆಸರು ಅಂಬಿಕಾ.14 ನೇ ವಯಸ್ಸಿಗೇನೇ ಇವರ ವಿವಾಹ ನಡೆಯಿತು. 18 ವರ್ಷ ಕಳೆಯುವಷ್ಟರಲ್ಲಿ ಎರಡು ಮಕ್ಕಳ ತಾಯಿಯಾದಳು. ಈಕೆಯ ಗಂಡ ತಮಿಳುನಾಡು ರಾಜ್ಯದ ದಿಂಡಿಗಲ್ ಪೊಲೀಸ್ ಸ್ಟೇಷನ್ ನಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ದಿನ ಕರ್ತವ್ಯ ನಿರತನಾಗಿರುವಾಗ ಓರ್ವ ಹಿರಿಯ ಅಧಿಕಾರಿಗೆ ತನ್ನ ಗಂಡ ಸೆಲ್ಯೂಟ್ ಹೊಡೆಯುವುದನ್ನು ನೋಡಿ ಅಂಬಿಕಾ ಅಚ್ಚರಿಗೊಂಡಳು. ಅಮಾಯಕಳಾದ ಆಕೆ ‘ನೀವು ಏಕೆ ಆತನಿಗೆ ಸೆಲ್ಯೂಟ್ ಹೊಡೆದಿರಿ’ ಎಂದು ಗಂಡನನ್ನು ಕೇಳಿದಳು. ‘ಅವರು ಹಿರಿಯ ಅಧಿಕಾರಿ. ನನಗಿಂತಲೂ ಹೆಚ್ಚಿಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಅವರಿಗೆ ಗೌರವ ನೀಡುವುದು ನನ್ನ ಕರ್ತವ್ಯ. ಹಾಗಾಗಿ ಅವರಿಗೆ ಸೆಲ್ಯೂಟ್ ಹೊಡೆದೆ’ ಎಂದು ಹೇಳಿದ.

‘ಹಾಗಾದರೆ, ನಾನೂ ಸಹ ಅವರಂತೆ ದೊಡ್ಡ ಅಧಿಕಾರಿ ಆಗುತ್ತೇನೆ’ ಎಂದಳು ಅಂಬಿಕಾ. ಅವಳು ಹತ್ತನೆಯ ತರಗತಿಯನ್ನು ಪಾಸ್ ಮಾಡಿರಲಿಲ್ಲ. ಆದುದರಿಂದ ‘ಮೊದಲಿಗೆ ನೀನು ಹತ್ತನೆಯ ತರಗತಿ ಪಾಸಾಗು’ ಎಂದು ಗಂಡ ನಗುತ್ತಾ ಹೇಳಿದ.

ಅಂಬಿಕಾ ತನ್ನ ಗಂಡನ ಮಾತುಗಳನ್ನು ಹಗುರವಾಗಿ ತೆಗೆದುಕೊಳ್ಳದೆ, ಚಾಲೆಂಜ್ ಆಗಿ ತೆಗೆದುಕೊಂಡಳು. ನಂತರದ ದಿನಗಳಲ್ಲಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಅಡೆ ತಡೆಗಳಿಲ್ಲದೆ ಪದವಿ ಪೂರೈಸಿದಳು. ನಂತರ ಕೋಚಿಂಗ್ ಗಾಗಿ ‘ಚೆನ್ನೈ’ ಸೇರಿಕೊಂಡಳು. ಆಕೆಯ ಗಂಡ ಸಹ ಆಕೆಯ ಉತ್ಸಾಹವನ್ನು ನೋಡಿ ಬೆಂಬಲ ನೀಡತೊಡಗಿದ. ಚೆನ್ನೈ ನಲ್ಲಿ ಒಂದು ಪ್ರತಿಷ್ಟಿತ ಕೋಚಿಂಗ್ ಸೆಂಟರ್ ಹಾಗೂ ಹಾಸ್ಟೆಲ್ ಗೆ ಆಕೆಯನ್ನು ಸೇರಿಸಿದ. ಮಕ್ಕಳ ಲಾಲಲೆ ಪಾಲನೆಯನ್ನು ತಾನೇ ವಹಿಸಿಕೊಂಡ.

ಮೊದಲ ಪ್ರಯತ್ನದಲ್ಲೇ ಪ್ರಿಲಿಮ್ಸ್ ನಲ್ಲಿ ಅನುತ್ತೀರ್ಣಳಾದಳು. ಎರಡನೆಯ ಪ್ರಯತ್ನದಲ್ಲಿ ಮೆಯಿನ್ಸ್ ನಲ್ಲಿ ಅನುತ್ತೀರ್ಣಳಾದಳು. ಮೂರನೆ ಸಲ ಮೆಯಿನ್ಸ್ ಅನುತ್ತೀರ್ಣಳಾದಳು. ‘ಇನ್ನು ನಿನ್ನ ಕೈಯಿಂದ ಓದಲು ಆಗುವುದಿಲ್ಲ.ಮನೆಗೆ ಬಂದು ಬಿಡು’ ಎಂದು ಆಕೆಯ ಗಂಡ ಹೇಳಿದ.’ಇನ್ನೊಂದು ಅವಕಾಶ ಕೊಡಿ’ ಎಂದು ಬೇಡಿಕೊಂಡು ತನ್ನ ಪ್ರಯತ್ನವನ್ನು ಮುಂದುವರೆಸಿದಳು. ನಾಲಕ್ಕನೇ ಪ್ರಯತ್ನದಲ್ಲಿ ಪ್ರಿಲಿಮ್ಸ್, ಮೆಯಿನ್ಸ್, ಇಂಟರ್ ವ್ಯೂ ನಲ್ಲೂ ವಿಜಯ ಸಾಧಿಸಿದಳು. ಕೊನೆಗೆ IASಆಗಿ ಮನೆಗೆ ಮರಳಿದಳು.

ನನ್ನ ಜೀವನವಿಷ್ಟೇ…ನನ್ನ ಹಣೆ ಬರಹವಿಷ್ಟೇ ಎಂದು ಕೈಚೆಲ್ಲಿ ಕುಳಿತರೆ… ಅಂಬಿಕಾ ಸಹ ಇದ್ದಲ್ಲೇ ಇರುತ್ತಿದ್ದಳು. ದೈರ್ಯವಾಗಿ ಹೆಜ್ಜೆಯಿಟ್ಟು ತನ್ನ ಲಕ್ಷ್ಯವನ್ನು ಸಾಧಿಸಿದಳು.

Comments (2)

  1. Medum congratulations

  2. It’s a big achieve

Comment here