Life Story

ಹತ್ತು ವರ್ಷಗಳು ರಾಜ್ಯಕ್ಕಾಗಿ ಸೇವೆ ಸಲ್ಲಿಸಿದ- ಹತ್ತು ದಿನಗಳ ಕಾಲ ನಾಯಿಗಳ ಸೇವೆ ಮಾಡಿದ… ಎರಡರ ನಡುವೆ ಇರುವ ವ್ಯತ್ಯಾಸವಿದು.

ಒಂದು ರಾಜ್ಯವನ್ನು ಒಬ್ಬ ಕ್ರೂರ ರಾಜ ರಾಜ್ಯವಾಳುತ್ತಿದ್ದನು. ಅವನ ಬಳಿ ಅಪಾಯಕಾರಿಯಾದ ಹತ್ತು ನಾಯಿಗಳಿದ್ದವು. ತಪ್ಪು ಮಾಡಿದ ಸೈನಿಕರನ್ನು ಹಾಗೂ ಕೆಟ್ಟ ಸಲಹೆಗಳನ್ನು ನೀಡಿದವರನ್ನು ಶಿಕ್ಷಿಸಲು ಆ ನಾಯಿಗಳನ್ನು ಬಳಸುತ್ತಿದ್ದ. ಹಸಿವಿನಿಂದ ಕಂಗೆಟ್ಟಿರುವ ಆ ಕ್ರೂರ ನಾಯಿಗಳು ಅವರನ್ನು ತಿಂಗು ತೇಗುತ್ತಿದ್ದವು. ಇದೇರೀತಿ ಒಮ್ಮೆ ಓರ್ವ ಸೈನಿಕನಿಗೆ ಶಿಕ್ಷೆ ವಿಧಿಸಿದ. ಸೈನಿಕನನ್ನು ಶಿಕ್ಷಿಸುವ ಸಲುವಾಗಿ, ಕ್ರೂರ ನಾಯಿಗಳಿಗೆ ಆಹಾರವಾಗಿ ನೀಡಲು ಆಜ್ಞಾಪಿಸಿದ.

ಇದರಿಂದ ಬೇಸರಗೊಂಡ ಸೈನಿಕ ‘ನಾನು ನಿಮಗೆ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವೆ. ಆದುದರಿಂದ ದಯಮಾಡಿ ನನಗೆ ಹತ್ತು ದಿನಗಳ ನಂತರ ಶಿಕ್ಷೆಯನ್ನು ವಿಧಿಸಿ’ ಎಂದು ಬಿನ್ನವಿಸಿಕೊಂಡ. ಸೈನಿಕನ ಬೇಡಿಕೆಗೆ ರಾಜ ಸಮ್ಮತಿಸಿದ. ಕುಶಾಗ್ರಮತಿಯಾದ ಸೈನಿಕ ನಾಯಿಗಳನ್ನು ಸಾಕುವವನ ಬಳಿಗೆ ತೆರಳಿ, ಹತ್ತು ದಿನಗಳ ಕಾಲ ನಾಯಿಗಳನ್ನು ಆರೈಕೆ ಮಾಡುವ ಅವಕಾಶ ನೀಡೆಂದ.ಆ ಹತ್ತು ದಿನಗಳಲ್ಲಿ ನಾಯಿಗಳಿಗೆ ಒಳ್ಳೆಯ ಊಟವನ್ನು ನೀಡಿದ,ಸ್ನಾನ ಮಾಡಿಸಿದ.ನಾಯಿಗಳನ್ನು ಪ್ರೀತಿಯಿಂದ ನೋಡಿಕೊಂಡ.

ಹತ್ತು ದಿನಗಳ ಬಳಿಕ ರಾಜ ತನ್ನ ಆಜ್ಞೆಯನ್ನು ಜಾರಿಗೊಳಿಸಲು ಅನುವಾದ. ಸೈನಿಕನನ್ನು ನಾಯಿಗಳಿಗೆ ಎಸೆಯಲು ತಿಳಿಸಿದ. ಸೈನಿಕನನ್ನು ನಾಯಿಗಳ ಹತ್ತಿರ ಎಸೆದಾಗ, ಅವನನ್ನು ತಿನ್ನುವ ಬದಲು ಬಾಲ ಅಲ್ಲಾಡಿಸುತ್ತಾ ಪ್ರೀತಿಯಿಂದ ಸೈನಿಕನ ಕಾಲುಗಳನ್ನು ನೆಕ್ಕಲಾರಂಭಿಸಿದವು. ರಾಜನ ಸಹಿತ ಅಲ್ಲಿ ನೆರೆದಿದ್ದ ಜನರೆಲ್ಲರೂ ಆಶ್ಚರ್ಯಚಕಿತರಾದರು.

ಅಲ್ಲಿ ಏನು ನಡೆಯುತ್ತಿದೆ ಎಂದು ಅರಿತುಕೊಳ್ಳುವ ಮೊದಲೇ ಸೈನಿಕ ‘ರಾಜ, ನಾನು ಕೇವಲ ಹತ್ತು ದಿನಗಳ ಕಾಲ ಈ ನಾಯಿಗಳ ಸೇವೆ ಮಾಡಿದೆ. ನಾನು ಮಾಡಿದ ಉಪಕಾರವನ್ನು ಅವು ಮರೆಯದೆ, ನನ್ನನ್ನು ಪ್ರೀತಿಸತೊಡಗಿವೆ. ಆದರೆ, ನಾನು ಈ ರಾಜ್ಯಕ್ಕಾಗಿ ಹತ್ತು ವರ್ಷಗಳು ಸೇವೆ ಸಲ್ಲಿಸಿದರೂ ಅದನ್ನು ಮರೆತು ನನಗೆ ಶಿಕ್ಷೆ ವಿಧಿಸಿದಿರಿ’ ಎಂದ. ಒಡನೆಯೇ ರಾಜನಿಗೆ ತನ್ನ ತಪ್ಪಿನ ಅರಿವಾಗಿ ಶಿಕ್ಷೆಯನ್ನು ಹಿಂತೆಗೆದುಕೊಂಡ.ಅಂದಿನಿಂದ ಸೈನಿಕರನ್ನು ಪ್ರೀತಿಯಿಂದ ನೋಡಿಕೊಳ್ಳಲಾರಂಭಿಸಿದ. ಶಿಕ್ಷೆಗೆ ಒಳಪಡಿಸಿದ್ದ ಸೈನಿಕನಿಗೆ ‘ಸೇನಾಧಿಕಾರಿಯಾಗಿ’ ಭಡ್ತಿ ನೀಡಿದ.

Comment here